ಜಪಾನೀ ಸಾಹಿತ್ಯ

	ಯಾಮಾಟೋ ಕಾಲ (ಪ್ರಾಚೀನಯುಗ) : ಕ್ರಿ.ಶ. 794ರವರೆಗೆ : ಮೊದಲನೆಯ ನಾಲ್ಕು ಶತಮಾನಗಳಲ್ಲಿ ಕೊರಿಯದ ಮೂಲಕ ಕ್ರಮೇಣ ಪ್ರವೇಶಿಸಿದ ಚೀನೀ ನಾಗರಿಕತೆಯನ್ನು ರಕ್ತಗತ ಮಾಡಿಕೊಂಡುದರ ಪರಿಣಾಮವಾಗಿ ಪ್ರಾಚೀನ ಜಪಾನೀ ಸಾಹಿತ್ಯ ಬೆಳೆಯಿತು. ಚೀನೀ ಲಿಪಿಯನ್ನು ಬಳಸಿಕೊಳ್ಳುವುದಕ್ಕೆ ಮೊದಲು ಜಪಾನೀಯರಿಗೆ ಸ್ವಂತ ಲಿಪಿ ಇರಲಿಲ್ಲ. ಜಪಾನೀ ಭಾಷಾ ಧ್ವನಿಗಳಿಗೆ ಚೀನೀ ಲಿಪಿಯನ್ನು ಬಳಸುವುದರ ಪರಿಣಾಮವಾಗಿ ಅಂದಿನ ನಾಲ್ಕು ಶತಮಾನಗಳಲ್ಲಿ ಸಾಹಿತ್ಯ ನಿರ್ಮಾಣ ಹೇರಳವಾಗಿ ಆಯಿತು ನೋರಿಟೊ (ಷಿಂಟೋ ಸ್ತೋತ್ರಗಳು), ಸೆನ್‍ಮ್ಯೊ (ಚಕ್ರವರ್ತಿಯ ಶಾಸನಗಳು), ಕೊಜಿಕಿ ಮತ್ತು ನಿಹೋನ್ ಷೋಕಿ (ಎರಡೂ ಅರ್ಧಭಾಗ ಪುರಾಣ ರೂಪದಲ್ಲಿರುವ ಇತಿಹಾಸಗಳು) ಮತ್ತು ಪುಡೋಕಿ (ಸ್ಥಳವೃತ್ತಾಂತಗಳು) -ಇವು ಏಳನೆಯ ಮತ್ತು ಎಂಟನೆಯ ಶತಮಾನಗಳಲ್ಲಿ ಹುಟ್ಟಿದ ಕೃತಿಗಳು. ಮನ್ಯೋಷೂ ಎಂಬುದು ಆ ಕಾಲದ ಮುಖ್ಯ ಸಾಹಿತ್ಯ ಕೃತಿ. ಅದರಲ್ಲಿರುವ ಕವಿತೆಯ ಸಂಖ್ಯೆ ನಾಲ್ಕುಸಾವಿರದೈನೂರಕ್ಕೂ ಮೀರಿದೆ. ಕವಿಗಳ ಸಂಖ್ಯೆ ನಾನೂರೈವತ್ತಕ್ಕೂ ಹೆಚ್ಚಾಗಿದೆ. ಅಲ್ಲದೆ ಜನಜೀವನದ ಪ್ರಾಯಶಃ ಎಲ್ಲ ಪ್ರಸಂಗಗಳೂ ಕಾವ್ಯವಿಷಯಗಳಾಗಿವೆ. ಅದರಲ್ಲಿನ ಪದ್ಯಗಳಲ್ಲಿ ನೈಜ ಹೃದಯಾನುಭೂತಿಗಳೂ ಆಳವಾದ ಭಾವಗಳೂ ಸರಳವೂ ನೇರವೂ ಆದ ಮಾತುಗಳಲ್ಲಿ ನಿರೂಪಿತವಾಗಿವೆ. ಐದು ಏಳು, ಐದು ಏಳು ಅಕ್ಷರಗಳುಳ್ಳ ವಾಕ್ಯ ಎಂಬ ಛಂದಸ್ಸು ಆ ಕಾಲದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿತ್ತಲ್ಲದೆ ಕಾವ್ಯರೂಪಕ್ಕೆಲ್ಲ ಈ ಛಂದಸ್ಸೇ ಮಾದರಿಯಾಗಿತ್ತು. 	 

  	ಹೀಯಾನ್ ಕಾಲ (ಪ್ರೌಢಕಾವ್ಯಗಳ ಕಾಲ) : ಕ್ರಿ.ಶ. 794-1192. ಈ ಕಾಲದಲ್ಲಿ ಕಾನಾ ಎಂಬ ಅಕ್ಷರಮಾಲಿಕೆ ನಿರ್ಮಾಣಗೊಂಡು ಜಪಾನೀ ಭಾಷೆಯನ್ನು ಬರೆಹಕ್ಕಿಳಿಸಲು ಸುಲಭವಾಯಿತು. ಅದರ ಪರಿಣಾಮವಾಗಿ ಜಪಾನೀ ಸಾಹಿತ್ಯ ಹುಲುಸಾಗಿ ಬೆಳೆಯತೊಡಗಿತು. ಸಾಹಿತ್ಯದ ಕೃತಿಗಳಿಗೆಲ್ಲ ರಾಜಾಸ್ಥಾನದ ಸರದಾರರೂ ಸ್ತ್ರೀಯರೂ 
ಆಸರೆಯಾಗಿದ್ದುದರಿಂದ ಕಾವ್ಯದ ವಿಷಯದಲ್ಲಿ ರಸಜ್ಞತೆಗೂ ಸದಭಿರುಚಿಗೂ ಹೆಚ್ಚು ಪ್ರಾಶಸ್ತ್ಯ ದೊರೆಯಿತು. ಹತ್ತನೆಯ ಶತಮಾನದ ಪ್ರಾರಂಭದಲ್ಲಿ ಚಕ್ರವರ್ತಿಯ ಅಪೇಕ್ಷೆಯಂತೆ ಕೋಕಿನ್‍ಷೂ ಎಂಬ ಗ್ರಂಥದಲ್ಲಿ ಸಂಗ್ರಹಿತವಾದ ಕವಿತೆಗಳ ರೂಪ ಅತ್ಯಂತ ಕುಶಲವೂ ಪರಿಷ್ಕøತವೂ ಆಗಿರುವುದಲ್ಲದೆ ಅವುಗಳ ಭಾವಗಳೂ ತುಂಬ ನವುರಾಗಿವೆ. ಆ ಕಾಲದಲ್ಲಿ ಸಾಹಿತ್ಯದ ಒಂದು ಪ್ರತ್ಯೇಕ ಪ್ರಕಾರವಾಗಿ ದಿನಚರಿಗಳೂ ಪ್ರವಾಸಕಥನಗಳೂ ಕಾನಾ ಎಂಬ ಶೈಲಿಯಲ್ಲಿ ಅಧಿಕ ಸಂಖ್ಯೆಯಲ್ಲಿ ನಿರ್ಮಿತವಾದವು. ಈ ಯುಗದ ಅತ್ಯಂತ ಶ್ರೇಷ್ಠ ಕೃತಿ ಗೆಂಜಿಮೊನೊಗಟರಿ (ಗೆಂಜಿಯ ಕಥೆ) ಎಂಬುದು. ಈ ಗ್ರಂಥ ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಗೋಚರವಾಗುವ ಕಾದಂಬರಿ ಎಂಬುದಾಗಿ ಪರಿಗಣಿತವಾಗಿದೆ.

    	ಕಾಮಾಕೂರಾ ಮುರೊಮಾಜಿ ಯುಗ (ಮಧ್ಯಯುಗ) : (ಕ್ರಿ .ಶ.1192-1603) : ಹೀಯಾನ್ ಯುಗದ ಕೊನೆಯಲ್ಲಿ ಯೋಧವರ್ಗ ಪ್ರಾಬಲ್ಯಕ್ಕೆ ಬರಲು ಪ್ರಾರಂಭವಾಯಿತು ಮತ್ತು ಒಂದಾದ ಮೇಲೊಂದು ಯುದ್ಧ ಒದಗಿ ಪ್ರಭುಗಳು ಪದೇ ಪದೇ ಬದಲಾಗುತ್ತಿದ್ದರು. ಈ ಯುಗದ ಸಾಹಿತ್ಯಪ್ರಕಾರಗಳಲ್ಲಿ ಸಮಾಜದ ಅನಿಶ್ಚಿತ ಪರಿಸ್ಥಿತಿ ಪ್ರತಿಬಿಂಬಿತವಾಗಿ ಜಗತ್ತು ಮತ್ತು ಜೀವ ಇವುಗಳು ಅನಿತ್ಯವೆಂಬ ಬೌದ್ಧಮತದ ನೆರಳು ಅವುಗಳ ಮೇಲೆ ಬಿದ್ದಿದೆ. ಜಪಾನೀ ಶಬ್ದಗಳೊಂದಿಗೆ ಅನೇಕ ಚೀನೀ ಪದಗಳನ್ನು ಬೆರೆಸಿರುವ ವೀರ್ಯವತ್ತಾದ ಶೈಲಿಯಲ್ಲಿ ಹೇರಳವಾಗಿ ಸೈನಿಕ ಕಥೆಗಳು ಈ ಕಾಲದಲ್ಲಿ ಉದ್ಭವವಾದವು. ವೃದ್ಧಿಯ ಬೆಂಗಡೆಯೇ ಹಾನಿಯೂ ಬರುತ್ತದೆ-ಎಂಬ ತತ್ತ್ವವನ್ನು ಅನುಸರಿಸಿ ಅತ್ಯಂತ ಪ್ರಸಿದ್ಧವಾದ ಹೈಕೂ ಮೊನೊಗಟರಿ (ಹೈಕೂ ಕಥೆ) ಎಂಬ ಕಾವ್ಯ ಬೌದ್ಧಮತದ ಸಮಸ್ತ ವಸ್ತುಗಳ ಅನಿತ್ಯವಾದವನ್ನು ಎತ್ತಿಹೇಳುವ ಮಾತಿನಿಂದ ಪ್ರಾರಂಭವಾಗುತ್ತದೆ. ತ್ಸುರೆಸುರೆ ಗುಸ (ಸೋಮಾರಿತನವನ್ನು ಕುರಿತ ಪ್ರಬಂಧಗಳು) ಮತ್ತು ಹುಜೊಕಿ (ಸಂನ್ಯಾಸಿಯನ್ನು ಕುರಿತ ಪ್ರಬಂಧ) ಇತ್ಯಾದಿ ಹಲವು ಪ್ರಬಂಧಗಳೂ ಈ ಅನಿತ್ಯತಾ ವಾದವನ್ನೇ ಎತ್ತೀ ಹಿಡಿಯುತ್ತವೆ. ಕನ್ನಮಿ ಕ್ರಿಯೊತ್ಸುಗು ಮತ್ತು ಸಿಯಾಮಿ ಮೊಟೋಕಿಯೊ ಎಂಬಿಬ್ಬರು ಪ್ರತಿಭಾಶಾಲಿಗಳಿಂದ ಪರಿಣತಿಯನ್ನು ಪಡೆದ ನೋ ಎಂಬ ನಾಟಕಗಳೂ ಈ ಬೌದ್ಧಮತದ ಭಾವನೆಯಿಂದಲೇ ಬಣ್ಣಗೊಂಡಿವೆ. ಈ ಕಾಲದಲ್ಲಿ ಕವಿತಾ ಸಂಕಲನಗಳ ಹದಿನೈದು ಸಂಚಿಕೆಗಳು ಸಂಪಾದಿತವಾದವು. ಇವುಗಳಲ್ಲಿ ಷಿಂಕೋಕಿನ್‍ಷು ಎಂಬುದು ಅದರ ಸಮೀಚೀನವಾದ ಸಂಕೇತಾರ್ಥ ಮತ್ತು ಕುಶಲವಾದ ಭಾವನೆಗಳ ದೆಸೆಯಿಂದ ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ತ್ಯ ಪಡೆದಿದೆ.

   	ಟೋಕೂಗಾವಾ ಯುಗ (ಆಧುನಿಕ ಯುಗಕ್ಕೆ ಮುಂಚಿನ ಕಾಲ) : ಕ್ರಿ.ಶ. 1603-1867. ಹದಿನೇಳನೆಯ 
ಶತಮಾನದ ಮೊದಮೊದಲ ವರ್ಷಗಳಲ್ಲಿ ಜಪಾನಿನಲ್ಲಿ ಟೋಕೂಗಾವಾ ಸರ್ಕಾರ ಸ್ಥಾಪಿತವಾಗಿ ದೇಶದೊಳಗೆ ನೆಮ್ಮದಿ ಮೂಡಿತು. ಮತ್ತು ಅಲ್ಲಿಂದ ಮುಂದಕ್ಕೆ ಮೂರು ಶತಮಾನಗಳ ಪರ್ಯಂತ ಈ ಶಾಂತಿಯನ್ನು ಮುರಿಯುವ ಯಾವ ಪ್ರಸಂಗಗಳೂ ಬರಲಿಲ್ಲ.

   	ಹದಿನೇಳನೆಯ ಶತಮಾನದ ಮಧ್ಯಭಾಗದಿಂದ ಹತ್ತೊಂಬತ್ತನೆಯ ಶತಮಾನದ ಮಧ್ಯದವರೆಗೆ, ಸರ್ಕಾರದ ಶಾಸನದ ಪ್ರಕಾರ, ಜಪಾನಿಗೆ ಹೊರದೇಶಗಳ ಸಾಮಾನ್ಯ ಸಂಪರ್ಕ ತಪ್ಪಿಹೋಯಿತು. ಈ ಶಾಂತಯುಗದಲ್ಲಿ ಅನೇಕ ವಿಧವಾದ ಸಾಹಿತ್ಯ ಪ್ರಕಾರಗಳೂ ಅಭಿವೃದ್ಧಿಗೊಂಡುವು. ಆರ್ಥಿಕವಾಗಿ ತುಂಬ ಪ್ರಬಲವಾದ ವಣಿಕವರ್ಗದವರೂ ಅಂತರ್ ಯುದ್ಧಗಳಿಂದ ಬಿಡುಗಡೆ ಹೊಂದಿದ ಕ್ಷೇತ್ರವರ್ಗದವರೂ ಸಾಹಿತ್ಯ ನಿರ್ಮಾಣದಲ್ಲಿ ಮುಂದೆ ಬಂದರು. ಇವರ ಭಾವನೆಗಳು ರಾಜಾಸ್ಥಾನದ ಸರದಾರರ ಮತ್ತು ಬೌದ್ಧ ಪುರೋಹಿತರ ಭಾವನೆಗಳಿಗಿಂತಲೂ ಸಹಜವಾಗಿಯೇ ಭಿನ್ನವಾಗಿದ್ದವು. ವಣಿಕವರ್ಗ ಹಾಗೂ ವೇಶ್ಯಾಸ್ತ್ರೀಯರ ಪ್ರಣಯ ಮತ್ತು ಧನಕನಕ ವಸ್ತು ವ್ಯವಹಾರ-ಇವನ್ನು ಕುರಿತು ಅವೆಲ್ಲ ನಿಜವೆಂಬ ಹಾಗೆ ಮನಸ್ಸಿಗೆ ತುಟ್ಟುವಂತೆ ಇಹರ ಸೈಕಾಕು ಎಂಬಾತ ವರ್ಣಿಸಿದ. ಅವನ ಕಾದಂಬರಿಗಳು ಮತ್ತು ಕಾಬೂಕೀ ಎಂಬ ಜನಪ್ರಿಯ ನಾಟಕಗಳು ಕರುಣರಸಪ್ರಧಾನವಾದ ನೋ ನಾಟಕಗಳನ್ನು ಹಿಂದೆ ಹಾಕಿದವು. ಅನೇಕ ಜೋಯಾರಿ ನಾಟಕಗಳ ಕರ್ತೃವಾದ ಚಿಕಮಟ್ಸು ಮಾನ್ ಸೆಯಿಮಾರ್ ಎಂಬ ಕವಿಯೂ ಜಪಾನಿನಲ್ಲೆಲ್ಲ ಅತ್ಯಂತ ಶ್ರೇಷ್ಠ ನಾಟಕಕಾರನೆಂದು ಪ್ರಸಿದ್ಧನಾಗಿದ್ದಾನೆ. ಮುಖ್ಯವಾಗಿ ಮಾಟ್ಸು ಓ ಭಾಷೋ ಎಂಬ ಅತ್ಯಂತ ಶ್ರೇಷ್ಠ ದರ್ಜೆಯ ಕವಿಯ ಪ್ರಭಾವದಿಂದ ಹೈಕೂ ಎಂಬ ಐದು, ಏಳು ಮತ್ತು ಐದು ಅಕ್ಷರಗಳ ಬಹಳ ಚಿಕ್ಕ ಪದ್ಯಗಳು ಹುಲುಸಾಗಿ ಬೆಳೆದವು. ಭಾಷೋನ ಹೈಕೂ ಅನೇಕವೇಳೆ ತನ್ನ ಒಡಲಲ್ಲಿ ಇಡೀ ವಿಶ್ವವನ್ನೇ ಒಳಗೊಂಡಿರುತ್ತದೆ.

  	ಆಧುನಿಕ ಯುಗ : 1868ರಿಂದ ಮುಂದೆ : ಕ್ರಿ . ಶ. 1852ರಲ್ಲಿ ಜಪಾನ್ ತನ್ನ ಬಾಗಿಲನ್ನು ಹೊರಪ್ರಪಂಚಕ್ಕೆ ತೆರದಿಟ್ಟಿತು. ಹಾಗೂ ಕ್ರಿ.ಶ. 1868ರಲ್ಲಿ ಟೋಕೂಗಾವಾ ಷೋಗುಣಾಟೆ ಎಂಬುದರ ಬದಲಾಗಿ ಬಂದ ಸಾರ್ವಭೌಮ ಸರ್ಕಾರ ದೇಶವಿದೇಶಗಳಿಂದ ಜ್ಞಾನಸಂಪಾದನೆ ಮಾಡುವುದನ್ನೇ ತನ್ನ ರಾಜನೀತಿಯಾಗಿ ಮಾಡಿಕೊಂಡಿತು. ಪಾಶ್ಚಾತ್ಯ ನಾಗರಿಕತೆಯ ಪ್ರಬಲ ಪ್ರಭಾವ ಸಾಹಿತ್ಯ ಮೊದಲಾದ ಜನಜೀವನದ ಸಕಲ ಕ್ಷೇತ್ರಗಳಲ್ಲೂ ಗಣನೀಯವಾದ ಬದಲಾವಣೆಯನ್ನು ಉಂಟುಮಾಡಿತು. ಕಾಲ್ಪನಿಕ, ವಾಸ್ತವಿಕ ಮತ್ತು ಸಾಂಕೇತಿಕ ಮುಂತಾದ ಪಾಶ್ಚಾತ್ಯ ಸಾಹಿತ್ಯ ಪ್ರವೃತ್ತಿಗಳು ಇಲ್ಲಿಗೂ ಕ್ರಮೇಣ ಪ್ರವೇಶಿಸಿ ಜಪಾನೀ ಸಾಹಿತ್ಯದ ಮುನ್ನಡೆಗಳನ್ನು ತುಂಬ ಪ್ರಚೋದಿಸಿದವು. ಪಾಶ್ಚಾತ್ಯ ಲೇಖಕರ ಅನೇಕ ಕೃತಿಗಳು ಜಪಾನೀ ಭಾಷೆಗೆ ಭಾಷಾಂತರಗೊಂಡವು. ವಿದ್ಯೆ ಹರಡಿ ಓದುವವರ ಸಂಖ್ಯೆಯೂ ಹೆಚ್ಚಿತು. ಕಾವ್ಯದಲ್ಲಿ ಯೋಸಾನೋ ಅಕಿಕೊ ಮೊದಲಾದವರು ಹೊಸ ಕಲ್ಪನೆಗಳನ್ನೂ ಹೊಸ ಮಾತುಗಳನ್ನೂ ವಾಕ ಮತ್ತು ಹೈಕೂ ಎಂಬ ಸಾಂಪ್ರದಾಯಿಕ ಕಾವ್ಯರೂಪಗಳಲ್ಲಿ ತರುವ ಪ್ರವರ್ತನೆಗಳನ್ನು ಪ್ರಾರಂಭಿಸಿದರು, ಷಿಮೊಸಾಕಿ ಟೋಸನ್ ಎಂಬಾತ ಅನಿಯತ ಛಂದಸ್ಸಿನ ಪದ್ಯರಚನೆಯನ್ನು ಮೊದಲು ಮಾಡಿದ.

    	ಪಾಶ್ಚಾತ್ಯ ನಾಟಕಗಳನ್ನು ಭಾಷಾಂತರಿಸಿದ ಫಲವಾಗಿ ಜಪಾನೀ ನವೀನ ರಂಗಭೂಮಿ ಅಭಿವೃದ್ಧಿಗೊಂಡಿತು. ಅನೇಕ ಲೇಖಕರು ಕತೆಗಳನ್ನು ಹೇರಳವಾಗಿ ರಚಿಸಿದರು. ಅವುಗಳಲ್ಲಿ ಹಲವು ಪಾಶ್ಚಾತ್ಯ ಕಥಾ ತಂತ್ರಗಳನ್ನು ಅಳವಡಿಸಿಕೊಂಡಿವೆ. ಜಪಾನೀ ಸಾಹಿತ್ಯದಲ್ಲಿ ತುಲನಾತ್ಮಕವಾಗಿ ಅಲ್ಪಕಾಲದಲ್ಲಿಯೇ ಪಾಶ್ಚಾತ್ಯ ಪ್ರವಾಹಗಳು ದೇಹಗತವಾದುವು ಎಂದು ಹೇಳಬಹುದು ಮತ್ತು ಆಧುನಿಕ ಸಾಹಿತ್ಯ ಶೈಲಿಯನ್ನು ಪ್ರತಿಷ್ಠಾಪಿಸಿದ ಮೋರಿ ಓ ಗೈ ಮೊದಲಾದ ಶ್ರೇಷ್ಠವರ್ಗದ ಸ್ವತಂತ್ರ ಕೃತಿಕಾರರೂ ಅಹಂಪ್ರಜ್ಞೆಯ ಒಂದು ಸಮಸ್ಯೆಯನ್ನು ಆಧುನಿಕಾರ್ಥದಲ್ಲಿ ಒಂದೇ ಸಮನಾಗಿ ನಿರೂಪಿಸಿದ ನಟ್ಸುಮೇ ಸೋಸೆಕಿ ಎಂಬಾತನೂ ಇಪ್ಪತ್ತನೆಯ ಶತಮಾನದಲ್ಲಿ ಪ್ರವರ್ಧಿಸಿದರು.		*
ಆಧುನಿಕ ಯುಗದ ಹಿಂದಿನ ಘಟ್ಟಗಳಿಗೆ ಆಯಾ ಕಾಲದಲ್ಲಿನ ಆಡಳಿತದ ಕೇಂದ್ರದ ಹೆಸರನ್ನು ಕೊಡಲಾಗಿದೆ. `ಜಪಾನೀ ಸಾಹಿತ್ಯ ಎಂದರೆ ಜಪಾನೀಯರು ಜಪಾನಿ ಭಾಷೆಯಲ್ಲಿ ಮತ್ತು ಚೀನೀ ಭಾಷೆಯಲ್ಲಿ ಬರೆದ ಸಾಹಿತ್ಯ ಈ ಲೇಖನದಲ್ಲಿ ಜಪಾನೀ ಭಾಷೆಯಲ್ಲಿ ರಚಿತವಾದ ಸಾಹಿತ್ಯವನ್ನು ಪರಿಗಣಿಸಿದೆ. 

	ಕ್ರಿ.ಪೂ. ಎರಡನೆಯ ಶತಮಾನದವರೆಗೆ ಬರಹ ರೂಪದ ಸಾಹಿತ್ಯ ಎಲ್ಲಿದದ್ದರು ಲಾವಣಿಗಳು, ಭಜನೆಗಳು, ಪ್ರಾರ್ಥನೆಗಳು, ಪೌರಾನಿಕ ಕಥೆಗಳು ಸೃಷ್ಟಿಯಾದವು. ಇವು ಮುಂದಿನ ಗ್ರಂಥಗಳಲ್ಲಿ ದಾಖಲಾದವು. `ನೋರಿಟೊ, `ಸೆನ್‍ಪೊ, ಕೊಜಿಕಿ ಮತ್ತು ನಿ ಹೋನ್ ಷೋಕಿ, ಪುಡೋಕಿಗಳು ಲಭ್ಯವಿರುವ ಜಪಾನಿನ ಅತ್ಯಂತ ಪ್ರಾಚೀನ ಇತಿಹಾಸ ಸಾಮಗ್ರಿ. ಷಿಂಟೊ ಪೌರಾಣಿಕ ಕಥೆಗಳ ರೂಪದಲ್ಲಿದೆ. ಜಪಾನೀಯರ ಮೂಲ, ಆಡಳಿತ ವ್ಯವಸ್ಥೆಯ ವಿಕಾಸ ಇವೆಲ್ಲವುಗಳ ವಿವರಣೆ ಇಲ್ಲಿದೆ. `ಮನೋಷೂ ಸಂಕಲನವನ್ನು ಸಿದ್ಧಪಡಿಸಿದವನು ಕವಿ ಒಟೋಮೊ. ಇಲ್ಲಿನ ಕವನಗಳ ಮುಖ್ಯ ಮನೋಧರ್ಮ `ಮಕೋಟೊ (ಸತ್ಯ ಅಥವಾ ಪ್ರಾಮಾಣಿಕತೆ, ಶ್ರದ್ಧೆ).

	ಹೀಯಾನ್ ಕಾಲದಲ್ಲಿ ಸಾಹಿತ್ಯಕ್ಕೂ ಆಸ್ಥಾನದ ಶ್ರೀಮಂತ ವರ್ಗಕ್ಕೂ ಬಾಂಧವ್ಯ. ಈ ಘಟ್ಟದ ಹಿಂದಿನ ಕಾವ್ಯದಲ್ಲಿ ಪ್ರಾಮಾಣಿಕ ವೈಯಕ್ತಿಕ ಭಾವನೆಗಳು ಕಾವ್ಯದ ವಸ್ತುವಾದರೆ ಈ ಘಟ್ಟದಲ್ಲಿ ಮನುಷ್ಯ ನಿಸರ್ಗಗಳ ಸಂಬಂಧವು ಕವಿಗಳ ಗಮನವನ್ನು ಸೆಳೆಯಿತು. ಈ ಕಾಲದ ಪ್ರಮುಖ ಸಂಪಾದಕ ಕಿ ತ್ಸುರಯುಕಿ (ಸುಮಾರು 945ರಲ್ಲಿ ತೀರಿಕೊಂಡ) ಸ್ವತಃ ಕವಿಯಾಗಿದ್ದ; ಸಾಹಿತ್ಯ ಮೀಮಾಂಸೆಗೆ ಆಸ್ತಿಭಾರ ಹಾಕಿದವನು. ಇವನೇ ಸಾಹಿತ್ಯಕ ದಿನಚರಿ ಪ್ರಕಾರದ ಜನಕ; ತನ್ನ ಪ್ರವಾಸದ ಅನುಭವವನ್ನು ದಾಖಲಿಸಿದ್ದಾನೆ. ಹತ್ತನೆಯ ಶತಮಾನದ ಪ್ರಾರಂಭದಲ್ಲಿ ಕಿನ್ನರಿ ಕಥೆಗಳು ಮತ್ತು ಕಥನ ಕವನಗಳು ರಚಿತವಾದವು. ಈ ಘಟ್ಟದ ಅತಿ ಮುಖ್ಯ ಕೃತಿಗಳು ಮುರ ಸಾಕಿ ಶಿಖಬು ಬರೆದ ಗೆಂಜಿಯ ಕಥೆ ಮತ್ತು ಆಸ್ಥಾನದಲ್ಲಿದ್ದ ಮಹಿಳೆ ಸೇ ಷೊನಗಾನ್ ಬರೆದ ಮುಕುರ-ನೊ-ಷೊಷಿ (ತಲೆದಿಂಬನ ಪುಸ್ತಕ) ಗೆಂಜಿಯ ಕಥೆ ಹೀಯಾನ್ ಕಾಲದ ಆಸ್ಥಾನ ಜೀವನವನ್ನು ಚಿತ್ರಿಸುತ್ತದೆ. `ತಲೆದಿಂಬನ ಪುಸ್ತಕವೂ ಇದೇ ಬದುಕಿನ ಬೇರೆ ಮುಖಗಳನ್ನು ಚಿತ್ರಿಸುವ ಉಜ್ವಲ ಕೃತಿ.

	ಕಾಮಾಕೂರ ಮುರೊಮಾಚಿ ಕಾಲ ಪ್ರಕ್ಷುಬ್ಧತೆಯ ಕಾಲ ಈ ಕಾಲದಲ್ಲಿ ಹಲವು ಕವನ ಸಂಕಲನಗಳನ್ನು ಸಿದ್ಧ ಪಡಿಸಲಾಯಿತು. ಷಿನ್ ಕೊಕಿನ್-ಷು (1205) ಈ ಯುಗದ ವಿಷಾದ ಮತ್ತು ಏಕಾಕಿ ತನದ ಭಾವಗಳನ್ನು ವ್ಯಕ್ತ ಪಡಿಸುತ್ತದೆ. ಜಪಾನಿ ಸಾಹಿತ್ಯ ವಿಮರ್ಶಕರು ಈ ಯುಗದ ಮನೋಧರ್ಮವನ್ನು `ಯುಗನ್ ಎಂದು ವರ್ಣಿಸುತ್ತಾರೆ. ಹೀಗೆಂದರೆ `ನಿಗೂಢತೆ ಮತ್ತು ಗಾಢತೆ. ಈ ಪದದಲ್ಲಿ ಧಾರ್ಮಿಕ ಧ್ವನಿ ಇದೆ. ಈ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬ. ಅರ್ಚಕಿ ಸೈಗೋ ಸನ್ಯಾಸಿ-ಸನ್ಯಾಸಿನಿಯರು ಹಲವರು ಈ ಯುಗದಲ್ಲಿ ಸಾಹಿತ್ಯ ರಚನೆ ಮಾಡಿದರು. ಈ ಕಾಲದ ಒಂದು ಸ್ವಾರಸ್ಯವಾದ ಬೆಳೆವಣಿಗೆ ಎಂದರೆ `ರೆಂಗ ಎನ್ನುವ ಕಾವ್ಯ ಪ್ರಕಾರ ರೂಪುಗೊಂಡದ್ದು (14ನೆ ಶತಮಾನದ) ಇದರ ಛಂದಸ್ಸು ಸಂಕೀರ್ಣವಾದದ್ದು. ಮೂವರು ಅಥವಾ ಇನ್ನೂ ಹೆಚ್ಚು ಮಂದಿ ಕವಿಗಳು ಒಂದಾದ ಮೇಲೊಂದು ಪದ್ಯವನ್ನು ಸರದಿ ಪ್ರಕಾರ ರಚಿಸಿ ಕವನವನ್ನು ರೂಪಿಸುತ್ತಿದ್ದರು. ಈ ಪ್ರಕಾರದ ಅತ್ಯಂತ ಶ್ರೇಷ್ಠ ಕೃತಿ `ಮಿನಾಸೆ ಸಂಗಿನ್ (ಮಿನಾಸೆಯ ಮೂವರು ಕವಿಗಳು-1488).

	ಟೊಕೂಗಾವಾ ಯುಗದ ಸೈಕಾಕ್ಸ್ ವಣಿಕ ವರ್ಗದ ಸುಖ ಲೋಲುಪ ಬದುಕನ್ನು ನಿರೂಪಿಸಿದ, ಇವನದು ಉಜ್ವಲ ಸಾಧನೆ. ಇವನನ್ನು ಸರಿಗಟ್ಟಲಾರದಿದ್ದರೂ ಮತ್ತೊಬ್ಬ ಪ್ರಮುಖ ಬರಹಗಾರ ಜಿಪ್ಟನ್‍ಷ ಇಕ್ಕು. ಇವನು ಬರೆದ `ಟೊಕೈಡೋಚು ಹಿeóÁಕುರಿಗೆ (1822) ಇಬ್ಬರು ಅಲೆಮಾರಿಗಳ ವಿಫಲ ಸಾಹಸಗಳ, ಖುಷಿಕೊಡುವ ವೃತ್ತಾಂತ. ಹೈಕು ಈ ಕಾಲದಲ್ಲಿ ಪರಿಪೂರ್ಣತೆಯನ್ನು ಕಂಡಿತು. ಅರ್ಚಕ ಬಷೊ ಚಿತ್ರಕಾರ ಯೊಸ ಬುಸನ್ ಮತ್ತು ಬಡ ಕುಟುಂಬದಲ್ಲಿ ಹಳ್ಳಿಯಲ್ಲಿ ಜನಿಸಿದ ಕೊಬಯಷಿ ಇಸ, ಹೈಕು ಪ್ರಕಾರವನ್ನು, ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು.

	ಹತ್ತೊಂಬತ್ತನೆಯ ಶತಮಾನದಲ್ಲಿ ಮೊದಲು ಅನುವಾದವಾದದ್ದು ಬ್ರಿಟಿಷ್ ಬರಹಗಾರರ ಕೃತಿಗಳು ಇದರಿಂದಾಗಿ ರಾಜಕೀಯ ಕಾದಂಬರಿ ರೂಪುಗೊಂಡಿತು. ಸಾಹಿತ್ಯವನ್ನು ಕುರಿತ ಹೊಸ ಮನೋಧರ್ಮದ ಚಿಂತನೆ ಪ್ರಾರಂಭವಾಯಿತು. ಟ್ಸು ಚಾಚಿ ಶೊಯೋ ಎನ್ನುವ ಸಾಹಿತಿಯು, ಷೊಸೆಟ್ಸು ಷಿನ್‍ಜ್ಗು ಇ (ಕಾದಂಬರಿಯ ತಿರುಳು 1885) ಎನ್ನುವ ಕೃತಿಯಲ್ಲಿ, ಪಾಶ್ಚಾತ್ಯ ಮಾದರಿಯ ವಾಸ್ತವಿಕ ಕಾದಂಬರಿಗಳು ಬರಬೇಕೆಂದು ಪ್ರತಿಪಾದಿಸಿದ. ಆಡುಮಾತಿನಲ್ಲಿ ರಚಿತವಾದ ಮೊದಲನೆಯ ಕಾದಂಬರಿ ಫುಟಬಟೇ ಷಿ ಮೇಯ `ಅಲೆದಾಡುವ ಮೋಡ 1887 ಕಾದಂಬರಿಕಾರ, ಕವಿ ಒeóÁಕಿ ಕೋಯೊ ಕೆನ್ಯೂಷ್ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ. ಇದು ವಿದ್ಯಾರ್ಥಿಗಳ ಸಾಹಿತ್ಯ ಸಂಘ. 1890ರ ನಂತರ ಇದು ಪ್ರಭಾವೀ ಸಂಸ್ಥೆಯಾಯಿತು. ಪಾಶ್ಚಾತ್ಯ ತಂತ್ರಗಳನ್ನು ಬಳಸಿಕೊಂಡು ಪರಂಪರಾಗತ ಸಾಹಿತ್ಯಕ ಮೌಲ್ಯಗಳನ್ನು ಪ್ರತಿಪಾದಿಸುವ ಧೋರಣೆಯನ್ನು ಇದು ಅನುಸರಿಸಿತು.

	ಇಪ್ಪತ್ತನೆಯ ಶತಮಾನದಲ್ಲಿ ಜಪಾನಿನ ತರುಣ ಬರಹಗಾರನನ್ನು ಫ್ರಾನ್ಸಿನ `ನ್ಯಾಚುರಲಿಸ್ಟ್ ಸಿದ್ಧಾಂತವು ಆಕರ್ಷಿಸಿತು. ಈ ಸಿದ್ಧಾಂತವು ಸಾಮಾಜಿಕ ಹೂರಣವನ್ನು ಕಡಿಮೆ ಮಾಡಿ ಮಾರ್ಪಡಿಸಿಕೊಂಡು ಈ ಬರಹಗಾರರು ಸ್ವೀಕರಿಸಿದರು. ಷಿಮeóÁಕಿ ಟೋಸನ್‍ನ `ಹಕಾರ್ಯ (ಉಲ್ಲಂಘಿಸಿದ ದೈವಾಜ್ಞೆ, 1906) ಈ ಪಂಥವು ಬೇರು ಬಿಡಲು ನೆರವಾಯಿತು. ಇದು ಸಮಾಜ ಭ್ರಷ್ಠವಾದ ತರುಣನೊಬ್ಬನ ತಪ್ಪೊಪ್ಪಿಗೆಯ ರೂಪದಲ್ಲಿದೆ. ಇಬ್ಬರು ಪ್ರಮುಖ ಬರಹಗಾರರು ಈ ಪಂಥ ಬಂದ ದೂರ ಉಳಿದರೂ `ಗಾನ್ (ಕಾಡು ಹೆಬ್ಬಾತು, 1911-13) ಬರೆದ ಪೊರಿ ಓಗೈ ಬಲಾತ್ಕಾರದಿಂದಾಗಿ ಒಬ್ಬ ಜಿಪುಣನ ಉಪಪತ್ನಿಯಾದ ಹುಡುಗಿಯ ಭಾವನೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾನೆ. ನಟಸುಮೆ ಸೊಸೆಕಿ ಮನೋ ವಿಶ್ಲೇಷಣಾತ್ಮಕ ಕಾದಂಬರಿ ಪ್ರಕಾರದಲ್ಲಿ ಅದ್ಭುತ ಸಾಧನೆಯನ್ನು ಕೈಗೂಡಿಸಿಕೊಂಡ. ಇವನು ಜಪಾನಿನ ಅತ್ಯಂತ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬ. ಆಧುನಿಕ ಮನುಷ್ಯನ ಅಹಂಭಾವವನ್ನು ವಿಶ್ಲೇಷಿಸಿ ಖಂಡಿಸುವ ಒಂದು ಕಾಲ್ಪನಿಕ ಜಗತ್ತನ್ನೆ ಸೃಷ್ಟಿಸಿದ. 1910-30ರ ಅವಧಿಯಲ್ಲಿ ಅಕುಟಗಾವ ದಿಯುನೋಸುಕ ಶ್ರೇಷ್ಠ ಸಣ್ಣ ಕಥೆಗಳನ್ನು ರಚಿಸಿದ.

	1930ರಿಂದ ಜಪಾನಿನಲ್ಲಿ ಯುದ್ದೋತ್ಸಾಹ ವಾತಾವರಣವು ಬೆಳೆದು ಸಾಹಿತ್ಯ ಮತ್ತು ಕಥೆಗಳು ಹಿಂದಕ್ಕೆ ಸರಿದವು. ಯಸುನಾರಿ ಕವಾಬಾಟ ಮತ್ತು ಟಾನಿeóÁಕಿ ಜುನಿಚಿಕೊ ಸಮರೋತ್ತರ ಜಪಾನಿನಲ್ಲಿ ಪ್ರಸಿದ್ಧ ಬರಹಗಾರರಾದರು. ಭಾವಗೀತಾತ್ಮಕ ರೀತಿಯ ಸಾಹಿತ್ಯದ ರಚನೆಯಲ್ಲಿ ಕವಾಬಾಟ ಖ್ಯಾತಿ ಗಳಿಸಿದ. 1968ರಲ್ಲಿ ಇವನಿಗೆ ನೊಬೆಲ್ ಬಹುಮಾನ ಬಂದಿತು. ಮಿಷಿಮ ಯುಕಿಯೊನ ಕಾದಂಬರಿಗಳು, ಕಥೆಗಳು ಮತ್ತು ನಾಟಕಗಳಲ್ಲಿ ತನ್ನ ದೇಶವನ್ನು ಪಾಶ್ಚಾತ್ಯ ಸಂಸ್ಕøತಿ ಆವರಿಸುತ್ತದೆ ಎನ್ನುವ ವಿಷಾದವನ್ನು ಅಭಿವ್ಯಕ್ತಿಗೊಳಿಸುತ್ತವೆ. 1994ರಲ್ಲಿ ಕಾದಂಬರಿಕಾರ ಓವ ರೆನ್ಜೆಬರೊ ನೊಬೆಲ್ ಬಹುಮಾನವನ್ನು ಗಳಿಸಿದ.
								 (ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ